ಡೇಲಿ ಟೆಲಿಗ್ರಾಫ್
 	ಬ್ರಿಟನಿನ ದೊಡ್ಡ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಒಂದು. 1855ರ ಜೂನ್ 29ರಂದು ಬ್ರಿಟನಿನಲ್ಲಿ ಸ್ಟಾಂಪು ತೆರಿಗೆ ತೆಗೆದು ಹಾಕುವುದಕ್ಕೆ ಒಂದು ದಿನ ಮುಂಚೆ, ದಿ ಡೇಲಿ ಟೆಲಿಗ್ರಾಫ್ ಅಂಡ್ ಮಾರ್ನಿಂಗ್ ಪೋಸ್ಟ್ ಎಂಬ ಹೆಸರಿನಲ್ಲಿ ಪ್ರಕಟಣೆ ಆರಂಭವಾಯಿತು. ಪತ್ರಿಕೆಯ ಮಾಲೀಕ ಆರ್ತರ್ ಬಿ. ಸ್ಲೀ. ಮೊದಲ ಸಂಚಿಕೆಯಲ್ಲಿ ನಾಲ್ಕು ಪುಟಗಳಿದ್ದುವು. ಪ್ರತಿ ಪುಟದಲ್ಲೂ ಆರು ಅಂಕಣಗಳಿದ್ದುವು. ಪತ್ರಿಕೆಯ ಬೆಲೆ ಎರಡು ಪೆನಿ. ಸ್ವಲ್ಪ ಕಾಲದಲ್ಲೇ ಪತ್ರಿಕೆ ಹಣಕಾಸಿನ ತೊಂದರೆಗೆ ಒಳಗಾಯಿತು. ಮರುವರ್ಷ ಸ್ಲೀ ಇದರ ಒಡೆತನವನ್ನು ಜೋಸೆಫ್ ಲೆವಿಗೆ ವರ್ಗಾಯಿಸಿದರು. ಲೆವಿ ಇದನ್ನು ಲಂಡನಿನ ಪ್ರಥಮ ಪೆನಿ ವೃತ್ತ ಪತ್ರಿಕೆಯಾಗಿ ಪ್ರಕಟಿಸತೊಡಗಿದರು. ಅನಂತರ ಇದರ ಹೆಸರು ಡೇಲಿ ಟೆಲಿಗ್ರಾಫ್ ಎಂದಾಯಿತು. ಹೊಸ ತಾಂತ್ರಿಕ ಸುಧಾರಣೆಗಳಿಂದಾಗಿ ಡೇಲಿ ಟೆಲಿಗ್ರಾಫ್ ಹೆಚ್ಚು ಜನಪ್ರಿಯವಾಯಿತು. ಪ್ರಸಾರದಲ್ಲಿ ಗಣನೀಯ ಏರಿಕೆಯಾಯಿತು. ಸ್ವಲ್ಪಕಾಲದಲ್ಲೇ ಲೆವಿಯ ಮಗ ಎಡ್ವರ್ಡ್ ಲಾಸನ್ (ಅನಂತರ ಮೊದಲನೆಯ ಲಾರ್ಡ್ ಬರ್ನ್‍ಹ್ಯಮ್) ಇದರ ಸಂಪಾದಕರಾದರು. 1885ರ ವರೆಗೂ ಆತ ಸಂಪಾದಕರಾಗಿ ಮುಂದುವರಿದರು.

	ಪತ್ರಿಕೆಯನ್ನು ಭದ್ರಬುನಾದಿಯ ಮೇಲೆ ನಿಲ್ಲಿಸಿದವರು ಲಾಸನ್. ಸ್ಥಾಪನೆಯಾದ ಕೇವಲ ಮೂರು ವರ್ಷಗಳಲ್ಲಿ ಡೇಲಿ ಟೆಲಿಗ್ರಾಫ್ ಉಳಿದೆಲ್ಲ ದೈನಿಕಗಳ ಪ್ರಸಾರವನ್ನು ಮೀರಿಸಿತು. ಸ್ಟಾಂಪು ತೆರಿಗೆ ರದ್ದು ಮಾಡಿದ್ದು ಇದಕ್ಕೆ ತುಂಬ ಅನುಕೂಲವಾಯಿತು. 

	1861ರ ವೇಳೆಗೆ ಇದರ ಪ್ರಸಾರ 1,30,000 ಆಗಿತ್ತು. ಇದು ದಿ ಟೈಮ್ಸ್ ಪತ್ರಿಕೆಯ ಪ್ರಸಾರದ ಎರಡರಷ್ಟು. ಡೇಲಿ ಟೆಲಿಗ್ರಾಫ್ ಪತ್ರಿಕೆಯ ಸಿಬ್ಬಂದಿಯಲ್ಲಿ ಎಡ್ವರ್ಡ್ ಆರ್ನಾಲ್ಡ್, ಜಾರ್ಜ್ ಆಗಸ್ಟಸ್ ಸ್ಯಾಲ, ಎಡ್ವರ್ಡ್ ಡೈಸಿ, ಜೆ.ಎಂ.ಲಸೇಜ್, ಬೆನೆಟ್ ಬರ್ಲಿ, ಜೆ. ಎಲ್. ಗಾರ್ವಿನ್, ಎಚ್. ಡಿ. ಟೇಲ್ ಮುಂತಾದ ಪ್ರಖ್ಯಾತ ವ್ಯಕ್ತಿಗಳಿದ್ದರು. ಕ್ಲಿಮೆಂಟ್ ಸ್ಕಾಟ್, ಡಬ್ಲ್ಯೂ. ಎಲ್. ಕೋಟ್ರ್ನಿ, ಡಬ್ಲ್ಯೂ. ಎ. ಡಾರ್ಲಿಂಗ್ಟನ್ ಮುಂತಾದವರು ಇದರ ನಾಟಕ ಮತ್ತು ಸಾಹಿತ್ಯ ವಿಮರ್ಶಕರಾಗಿದ್ದರು. ಚಾಲ್ರ್ಸ್ ಡಿಕನ್ಸ್ ಕೂಡ ಈ ಪತ್ರಿಕೆಗೆ ಬರೆಯುತ್ತಿದ್ದರು. 

	ಪತ್ರಿಕೆ ಮಧ್ಯಮ ವರ್ಗದ ಜನಕ್ಕೆ ಹಿಡಿಸುವಂತಿದ್ದುದು ಅದರ ಜನಪ್ರಿಯತೆ ಹೆಚ್ಚುವುದಕ್ಕೆ ಒಂದು ಮುಖ್ಯಕಾರಣ. ಪತ್ರಿಕೆಯ ಉದಾರ ದೃಷ್ಟಿ 1878ರವರೆಗೂ ಮುಂದುವರಿಯಿತು. ಅನಂತರ ಇದರ ಧೋರಣೆಗಳಲ್ಲಿ ಬದಲಾವಣೆಗಳಾದುವು. 1927ರ ವೇಳೆಗೆ ಪತ್ರಿಕೆಯ ಪ್ರಸಾರ 84,000ಕ್ಕೆ ಇಳಿದುಹೋಗಿತ್ತು. ಮರುವರ್ಷ ವಿಸ್ಕೌಂಟ್ ಬರ್ನ್‍ಹ್ಯಂ ಇದನ್ನು ವಿಲಿಯಂ ಎವರ್ಟ್ ಬೆರಿ (ಅನಂತರ ವಿಸ್ಕೌಂಟ್ ಕ್ಯಾಮ್ರೋಸ್), ಜೇಮ್ಸ್ ಗೋಮರ್ ಬೆರಿ (ಅನಂತರ ವಿಸ್ಕೌಂಟ್ ಕೆಮ್ಸ್‍ಲಿ) ಮತ್ತು ಎಡ್ವರ್ಡ್ ಐಲಿಫರಿಗೆ ಮಾರಿದ. ಪ್ರಸಾರ ಮತ್ತೆ ಅಧಿಕವಾಗತೊಡಗಿತು. ಮುಂದಿನ ಎರಡು ವರ್ಷಗಳಲ್ಲಿ ಇಮ್ಮಡಿಸಿತು. ಆಗ ಪತ್ರಿಕೆಯ ಬೆಲೆಯನ್ನು 1 ಪೆನ್ನಿಗೆ ಇಳಿಸಲಾಯಿತು. 1937ರಲ್ಲಿ ಮತ್ತೊಂದು ದೈನಿಕ ಮಾರ್ನಿಂಗ್ ಪೋಸ್ಟ್ ಇದರೊಡನೆ ವಿಲೀನವಾಯಿತು. ಲಾರ್ಡ್ ಕ್ಯಾಮರೂಸನ ಒಡೆತನದಲ್ಲಿ ಡೇಲಿ ಟೆಲಿಗ್ರಾಫ್ ಕೀರ್ತಿ ಇನ್ನೂ ಬೆಳೆಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಪತ್ರಿಕಾ ಕಚೇರಿ ಬಾಂಬ್ ದಾಳಿಗೆ ತುತ್ತಾದರೂ ಇದರ ಪ್ರಕಟನೆ ಮಾತ್ರ ನಿಲ್ಲಲಿಲ್ಲ. ಸಂಡೆ ಡೇಲಿ ಟೆಲೆಗ್ರಾಫ್ ಇದರ ರವಿವಾರದ ಪ್ರಕಟಣೆ. ಇದು ಫ್ಲೀಟ್ ಸ್ಟ್ರೀಟ್‍ನಿಂದ ಪ್ರಕಟವಾಗುತ್ತಿದೆ. ಒಡೆತನ ಡೇಲಿ ಟೆಲಿಗ್ರಾಫ್ ಲಿಮಿಟೆಡ್ ಸಂಸ್ಥೆಯದು. ಇದರ ಈಗಿನ ಸಂಪಾದಕರು ಮಾರಿಸ್ ಗ್ರೀನ್. ಪ್ರಧಾನ ಸಂಪಾದಕರು ಮತ್ತು ಸಂಸ್ಥೆಯ ಅಧ್ಯಕ್ಷರು ಲಾರ್ಡ್ ಹಾರ್ಟ್‍ವೆಲ್.
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ